ಧರ್ಮಸ್ಥಳದ ಮೇಲೆ ನಿರಂತರ ನಡೆದ ಅಘಾತಗಳಿಂದ ನಾಡಿನ ಕೋಟ್ಯಂತರ ಮಂದಿ ನೊಂದಿದ್ದಾರೆ.
ಮುಸ್ಲಿಂ ಬಾಂಧವರಿಂದ ಧರ್ಮಸ್ಥಳ ಪಾದಯಾತ್ರೆ
ಧರ್ಮಸ್ಥಳದ ಮೇಲೆ ನಿರಂತರ ನಡೆದ ಅಘಾತಗಳಿಂದ ನಾಡಿನ ಕೋಟ್ಯಂತರ ಮಂದಿ ನೊಂದಿದ್ದಾರೆ. ವಿಶೇಷ ತನಿಖಾ ದಳ ವಿಚಾರಣೆ ನಡೆಸಲು ಆರಂಭಿಸಿದ ನಂತರವಂತೂ ಅನೇಕ ಆರೋಪಗಳು ನಿರಾಧಾರವೆಂದು ಸಾಬೀತಾಗಿದ್ದು ನಾಡಿನ ಜನರೆದುರು ನಿಚ್ಚಳವಾಗಿದೆ. ಅದಾಗಲೇ ಜನರ ಮನಸ್ಸಲ್ಲಿ ಮನೆ ಮಾಡಿರುವ ಧರ್ಮಸ್ಥಳದ ಕುರಿತ ಕೆಟ್ಟ ಭಾವನೆಗಳನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮೆಲ್ಲರನ್ನೂ ಇದೆ. ಏಕೆಂದರೆ ಧರ್ಮಸ್ಥಳ ಬರಿ ಒಂದು ಸಮುದಾಯಕ್ಕೆ ಸೇರಿದ ದೇವಸ್ಥಾನವಷ್ಟೇ ಅಲ್ಲ. ಅದು ನೂರಾರು ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ, ನಾಡಿನ ಜನರ ಆಶಾಕಿರಣವಾಗಿದೆ. ಸ್ವಸಹಾಯ ಸಂಘಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದು ಸಂಘ ಜಾತಿ-ಮತ-ಪಂಥ ಭೇದಗಳನ್ನು ಮರೆತು, ಎಲ್ಲರನ್ನೂ ಒಟ್ಟುಗೂಡಿಸಿ, ಸಾಲ ಕೊಟ್ಟು, ಅವರ ಆಶೋತ್ತರಗಳನ್ನು ಪೂರ್ಣಗೊಳಿಸಲು ಬೆಂಬಲವಾಗಿ ನಿಂತು, ಪ್ರತಿಯೊಬ್ಬರನ್ನೂ ಮೇಲೆತ್ತುವ ಕಾಯಕದಲ್ಲಿ ನಿರತವಾಗಿದೆ. ರುಡ್‌ಸೆಟ್ ಸ್ವಾವಲಂಬಿಗೊಳಿಸಿದ ತರುಣರಲ್ಲಿ ಹಿಂದೂಗಳು ಮಾತ್ರವಿಲ್ಲ. ಎಲ್ಲ ಜಾತಿ ಪಂಥ ವರ್ಗಗಳವರೂ ಇದ್ದಾರೆ. ಧರ್ಮಸ್ಥಳ ಅನ್ನದಾಸೋಹ ನಡೆಸುವಾಗ, ಜ್ಞಾನದಾಸೋಹ ನಡೆಸುವಾಗ, ಸ್ತ್ರೀಯರ ಮೂಲಕ ಸಮಾಜ ಸಂಘಟನೆಯ ಕೆಲಸದಲ್ಲಿ ನಿರತವಾಗುವಾಗ ಅಲ್ಲೆಲ್ಲಾ ಯಾವ ಅಡೆತಡೆಗಳೂ ಇಲ್ಲದೇ ಎಲ್ಲರನ್ನೂ ಸಮದರ್ಶಿಯಾಗಿ ನೋಡುವ ಭಾವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರದ್ದು.ಧರ್ಮಸ್ಥಳಕ್ಕೆ ಧಕ್ಕೆ ಬಂದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿದಂತೆ ಅನೇಕ ಮತಾಂಧರು ಸಮಾಜವನ್ನು ಜಾತಿ-ಜಾತಿಗಳಲ್ಲಿ ಒಡೆಯುವ, ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂದು ವಿಭಜಿಸುವ ಪ್ರಯತ್ನದಲ್ಲಿರುವಾಗ ಧರ್ಮಸ್ಥಳ ಸದ್ದಿಲ್ಲದೇ ಎಲ್ಲರನ್ನೂ ಒಂದು ಛತ್ರದಡಿ ತರುವ ಯತ್ನ ಮಾಡುತ್ತಿದೆ. ಮಂದಿರ ಹಿಂದೂಗಳದ್ದು, ಅದರ ನಿರ್ವಹಣೆ ಜೈನರನ್ನು, ಅಲ್ಲಿಂದ ನಡೆಯುವ ಸೇವಾಕಾರ್ಯಗಳ ಫಲಾನುಭವಿಗಳು ಎಲ್ಲ ಪಂಥಗಳಿಗೆ ಸೇರಿದವರು, ಹೀಗಿರುವಾಗ ಸರ್ವಧರ್ಮ ಸಮನ್ವಯದ ಮತ್ತು ರಾಷ್ಟ್ರೀಯ ಏಕತೆಯ ಪಾಠ ಬೋಧಿಸುವ ಸಾಮರ್ಥ್ಯ ಇರುವುದು ಧರ್ಮಸ್ಥಳಕ್ಕೇ. ಈ ಕ್ಷೇತ್ರದ ಮೇಲೆ ಸುಳ್ಳು ಆರೋಪ ಹೊರಿಸಿ ಅದನ್ನು ನಾಶಪಡಿಸಲು ಯತ್ನಿಸಿದರೆ ಅದು ನಮ್ಮ ಕಾಲಮೇಲೆ ನಾವೇ ಕೊಡಲಿ
ಏಟು ಹಾಕಿಕೊಂಡಂತೆ.
ಹೀಗಾಗಿ, ನವೆಂಬರ್ 18ರಂದು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗಿಯಾಗಲು ಹೋಗುತ್ತಿರುವ ನಾನು ಬರಿಯ ಭಾಷಣಕಾರನಾಗಿ ಹೋಗುತ್ತಿಲ್ಲ, ಬದಲಿಗೆ ಭಾರತದ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಏಕತೆಯ ಸಂದೇಶವನ್ನು ಹೊತ್ತು ಸಾಗುತ್ತಿದ್ದೇನೆ. ಹಾಗೆಂದೇ ಸುಮಾರು 350 ಕಿ.ಮೀಗಳ ಈ ಯಾತ್ರೆಯನ್ನು ನಡೆದೇ ಕ್ರಮಿಸುತ್ತಿದ್ದೇನೆ. ಶನಿವಾರ ಬೆಳಿಗ್ಗೆ 7 ಗಂಟೆಗೆ ವಿಧಾನಸೌಧದಿಂದ ಆರಂಭವಾಗುವ ನನ್ನ ಈ ಪಾದಯಾತ್ರೆ ಸುಮಾರು ಹತ್ತು ದಿನಗಳ ಕಾಲ ಜರುಗಲಿದ್ದು, ಉದ್ದಕ್ಕೂ ಜನರನ್ನು ಭೇಟಿಮಾಡುತ್ತಾ, ಅವರ ಸಮಸ್ಯೆಗಳನ್ನು ಮತ್ತು ಆಲೋಚನೆಗಳನ್ನು ಆಲಿಸುತ್ತಾ ಸಾಗಲಿದೆ. ನನ್ನೊಂದಿಗೆ ಅಲ್ಲಲ್ಲಿ ಜಾತಿ-ಮತ-ಪಂಥವನ್ನು ಮರೆತು ಅನೇಕರು ಕೂಡಿಕೊಳ್ಳಲಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಯಾನವಾಗಿದ್ದು ನಾನು ಸಮಾಜದ ಸಹಕಾರವನ್ನು ಕೋರುತ್ತೇನೆ.ಭಾರತ ಸಂಕಟದ ಸಮಯದಲ್ಲಿದೆ. ಒಂದೆಡೆ ತರುಣರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ ಮತ್ತೊಂದೆಡೆ ಈ ತರುಣರನ್ನು ಜಾತಿ-ಮತ-ಪಂಥಗಳ ಕದನಕ್ಕೆ ಹಚ್ಚುವ ದುಷ್ಟಶಕ್ತಿಗಳು ಕೆಲಸ ಮಾಡುತ್ತಿವೆ. ಭಾರತವನ್ನು ಉಳಿಸಿಕೊಳ್ಳಲು ನಾವೀಗ ಒಟ್ಟಾಗಿ ಹೆಜ್ವರ ಇಡಬೇಕಿದೆ. ಈ ಹಿಂದೆ ಅನೇಕರು ಸಾಗಿದ ಹಾದಿಯಲ್ಲಿ ಈಗ ನಾನು ನನ್ನ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಹಿರಿಯರು ಆಶೀರ್ವದಿಸಿ, ಕಿರಿಯರು ಕೈ ಜೋಡಿಸಿ ಜೊತೆಯಲ್ಲಿ ನಡೆಯೋಣ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸೋಣ.

Comments
Post a Comment